	ಕ್ರೋಧ	

ಅರಿಷಡ್ವರ್ಗಗಳೆಂದು ಪ್ರಸಿದ್ಧವಾಗಿದ್ದು ನಮ್ಮ ಶರೀರದೊಳಗೆ ಇರುವ ದುಷ್ಟಶತ್ರುಗಳಲ್ಲಿ ಎರಡನೆಯದು. ಕಾಮ ಏಷಃ ಕ್ರೋಧ ಏಷಃ ರಜೋಗುಣ ಸಮುದ್ಭವಃ. ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋಭಿಜಾಯತೇ-ಎಂಬ ಗೀತಾ ವಾಕ್ಯಗಳಂತೆ ಕಾಮ ಕ್ರೋಧಗಳೆರಡು ರಜೋಗುಣದಿಂದ ಹುಟ್ಟುವಂಥವು. ನಮಗೆ ಅಭಿಲಾಷೆ ಪೂರ್ತಿಯಾಗದೆ ಹೋದಾಗ ಅಥವಾ ನಮ್ಮ ಬಯಕೆಗೆ ಯಾವುದರಿಂದಲೇ ಆಗಲಿ ಅಡ್ಡಿಯುಂಟಾದಾಗ ಕ್ರೋಧ ಉಂಟಾಗುವುದರಿಂದ ಕ್ರೋಧ ಕಾಮಜವೆಂಬ ಭಾವನೆ ಇದೆ. ಕ್ರೋಧ ಉಂಟಾದಾಗ ರಕ್ತಚಲನೆಯಲ್ಲಿ ವೇಗ ಹೆಚ್ಚಿ ಮುಖ ಕೆಂಪಾಗುತ್ತದೆ. ಇದರಿಂದ ಕ್ರೋಧದ ವರ್ಣ ರಕ್ತ (ಕೆಂಪು) ಎಂದು ಕ್ರೋಧದ ಅಧಿದೇವತೆ ರುದ್ರ ಎಂದು ಕ್ರೋಧವನ್ನೇ ಸ್ಥಾಯಿಭಾವವಾಗಿ ಉಳ್ಳ ರಸರೌದ್ರ ಎಂದು ಅಭಿಪ್ರಾಯ ಬೇರೂರಲು ಅವಕಾಶವಾಯಿತು. ಕ್ರೋಧ ಹೆಚ್ಚಿದಾಗ ರಕ್ತವೇಗದಿಂದ ನೇತ್ರದೃಷ್ಟಿ ಕುಂಠಿತವಾಗುವುದರಿಂದ ಕ್ರೋಧಾಂಧ ಎಂಬ ಪದವೂ ಕ್ರೋಧವುಂಟಾದಾಗ ಕಣ್ಣುಕೆಂಪಗಾಗಿ ಜ್ವಲಿಸುವುದರಿಂದ ಕ್ರೋಧಾಗ್ನಿ ಎಂಬ ಪದವು ಬಳಕೆಗೆ ಬಂದಿವೆ. ಕ್ರೋಧವನ್ನು ಜಯಿಸಬಲ್ಲುವುದು ಕ್ಷಮಾಗುಣವೊಂದೇ ಎಂಬುದು ಅನುಭವಸಿದ್ಧ. 

ವರ್ಷಗಳ 60 ಹೆಸರುಗಳಲ್ಲಿ ಕ್ರೋಧಿ ಎಂಬುದು 38ನೆಯ ವರ್ಷದ ಹೆಸರು. ಆ ವರ್ಷ ಜನಿಸುವವರಲ್ಲಿ ರಜೋಗುಣ-ಅದರಲ್ಲೂ ಕ್ರೋಧ-ಪ್ರಧಾನವಾಗಿರುವುದೆಂದು ಜ್ಯೋತಿಃಶ್ಯಾಸ್ತ್ರದಲ್ಲಿ ಹೇಳಿದೆ. ಕೋಪ, ಅಮರ್ಶ, ರೋಷ, ಪ್ರತಿಘ, ರುಟ್, ಕ್ರುದ್-ಇವು ಅಮರಕೋಶದಲ್ಲಿ ಹೇಳಿರುವ ಕ್ರೋಧ ಶಬ್ದದ ಪರ್ಯಾಯಪದಗಳು. 				(ಎಸ್.ಆರ್.ಎ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ